ಮಖನ್ ಸಿಂಗ್ (೧ ಜುಲೈ ೧೯೩೭ - ೨೧ ಜನವರಿ ೨೦೦೨) ಅವರು ೧೯೬೦ ರ ದಶಕಕ್ಕೆ ಸೇರಿದ ಭಾರತೀಯ ಕ್ರೀಡಾಪಟು. ಅವರು ಪಂಜಾಬ್‌ನ ಹೋಶಿಯಾರ್ಪುರ್ ಜಿಲ್ಲೆಯ ಬಾತುಲ್ಲಾ ಗ್ರಾಮದಲ್ಲಿ ಜನಿಸಿದರು. == ವೃತ್ತಿಜೀವನ == ೧೯೬೪ ರಲ್ಲಿ ಕಲ್ಕತ್ತಾದಲ್ಲಿ ನಡೆದ ಭಾರತದ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಮಿಲ್ಕಾ ಸಿಂಗ್ ವಿರುದ್ಧದ ವಿಜಯವು ಅವರ ಪ್ರಮುಖ ಖ್ಯಾತಿಗೆ ಕಾರಣವಾಯಿತು. ಅವರು ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಹಲವಾರು ಚಿನ್ನದ ಪದಕಗಳನ್ನು ಗೆದ್ದರು. ೧೯೬೨ ಏಷ್ಯನ್ ಗೇಮ್ಸ್ ಮತ್ತು ೧೯೬೪ ರ ಬೇಸಿಗೆ ಒಲಿಂಪಿಕ್ಸ್‌ನಲ್ಲಿ ಭಾರತವನ್ನು ಪ್ರತಿನಿಧಿಸಿದರು. == ಕ್ರೀಡಾ ಸಾಧನೆ == ೧೯೫೯ ರಲ್ಲಿ ಕಟಕ್‌ನಲ್ಲಿ ನಡೆದ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಕಂಚನ್ನು ಗಳಿಸುವುದರ ಮೂಲಕ ಮಖನ್ ಅವರು ತಮ್ಮ ಮೊದಲ ಯಶಸ್ಸನ್ನು ಪಡೆದರು. ನಂತರ ಅವರು ದೆಹಲಿಯ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ೩೦೦ ಮೀಟರ್ ಓಟದಲ್ಲಿ ಬೆಳ್ಳಿಯ ಪದಕ ಮತ್ತು ಶಾರ್ಟ್ ಸ್ಪ್ರಿಂಟ್‌ನಲ್ಲಿ ಚಿನ್ನದ ಪದಕವನ್ನು ಗೆದ್ದರು. ೧೯೬೦ ರಲ್ಲಿ ಮದ್ರಾಸ್‌ನಲ್ಲಿ ಚಿನ್ನದ ಮತ್ತು ಬೆಳ್ಳಿಯ ಪದಕ ಪಡೆದರು. ೧೯೬೨ ರಲ್ಲಿ ಜಬಲ್ಪುರ್‌ನಲ್ಲಿ ನಾಲ್ಕು ಚಿನ್ನದ ಪದಕಗಳು ಮತ್ತು ೧೯೬೩ ರಲ್ಲಿ ತ್ರಿವಾಂಡ್ರನ್‌ನ್ನಲ್ಲಿ ಎರಡು ಚಿನ್ನ ಮತ್ತು ಒಂದು ಬೆಳ್ಳಿಯನ್ನು ಗೆದ್ದ ಅವರು, ನಂತರದ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಈ ಯಶಸ್ಸನ್ನು ಮುಂದುವರೆಸಿದರು. ೧೯೬೪ ರಲ್ಲಿ ಕಲ್ಕತ್ತಾದಲ್ಲಿ, ೪೦೦ ಮೀಟರ್ ಓಟದ ಸ್ಪರ್ಧೆಯಲ್ಲಿ ಮಿಲ್ಕಾ ಸಿಂಗ್ ಅವರ ವಿರುದ್ಧದ ಅವರ ಜಯ ಅವರಿಗೆ ಭಾರೀ ಯಶಸ್ಸನ್ನು ತಂದು ಕೊಟ್ಟಿತು. ಅವರು ಅಲ್ಲಿ ನಾಲ್ಕು ಚಿನ್ನದ ಪದಕಗಳನ್ನು ಪಡೆದರು. ಅವರು ಜಕಾರ್ತಾದಲ್ಲಿನ ೧೯೬೨ ರ ಏಷ್ಯನ್ ಕ್ರೀಡಾಕೂಟದಲ್ಲಿ ಭಾರತವನ್ನು ಪ್ರತಿನಿಧಿಸಿದರು. ಅಲ್ಲಿ ಅವರು ೪ ೪೦೦ ಮೀಟರ್‌ಗಳ ರಿಲೇಯಲ್ಲಿ ಚಿನ್ನ ಮತ್ತು ೪೦೦ ಮೀಟರುಗಳ ಓಟದಲ್ಲಿ ಬೆಳ್ಳಿ ಪದಕವನ್ನು ಗೆದ್ದರು. ಮಖನ್ ಸಿಂಗ್ ಅವರಿಗೆ, ಫಿರಂಗಿ ತೋಪುಗಾರ (ಆರ್ಟಿಲರಿ ಗನ್ನರ್) ಎಂಬ ರಾಷ್ಟ್ರೀಯ ಆಟದಲ್ಲಿ ವಿಶೇಷ ಆಸಕ್ತಿ ಇತ್ತು. ಅವರು ೧೯೫೯ ರಿಂದ ೧೯೬೪ ರವರೆಗೆ ಎಲ್ಲಾ ಕ್ರೀಡಾಕೂಟಗಳಲ್ಲಿ ಪಾಲ್ಗೊಂಡರು. ಅವರು ಒಟ್ಟು ೧೨ ಚಿನ್ನ, ಮೂರು ಬೆಳ್ಳಿ ಮತ್ತು ಒಂದು ಕಂಚಿನ ಪದಕವನ್ನು ಗೆದ್ದುಕೊಂಡರು. == ನಿವೃತ್ತಿ == ಅವರು ಭಾರತೀಯ ಸೈನ್ಯದಲ್ಲಿ ಸುಬೇದಾರ್ ಆಗಿದ್ದರು ಮತ್ತು ೧೯೭೨ ರಲ್ಲಿ ನಿವೃತ್ತಿ ಹೊಂದಿದರು. ಸೈನ್ಯದಿಂದ ನಿವೃತ್ತಿಯಾದ ನಂತರ ಅವರು ತಮ್ಮ ಗ್ರಾಮದಲ್ಲಿ ಸ್ಟೇಷನರಿ ಅಂಗಡಿಯನ್ನು ಪ್ರಾರಂಭಿಸಿದರು. == ನಿಧನ == ಅವರು ಮಧುಮೇಹಿಯಾಗಿದ್ದರು. ೧೯೯೦ ರಲ್ಲಿ ಅವರ ಕಾಲಿಗೆ ಗಾಜಿನ ತುಂಡಿನಿಂದ ಗಾಯವಾದದ್ದರಿಂದ ವೈದ್ಯರು ಕಾಲನ್ನು ಕತ್ತರಿಸುವ ಸಲಹೆ ನೀಡಿದರು. ನಂತರ ಅವರು ೨೦೦೨ ರಲ್ಲಿ ನಿಧನರಾದರು. ಅವರ ಸಾಧನೆಗಾಗಿ ಅವರಿಗೆ ಮರಣೋತ್ತರವಾಗಿ ಅರ್ಜುನ ಪ್ರಶಸ್ತಿಯನ್ನು ನೀಡಲಾಗಿದೆ. == ಉಲ್ಲೇಖ ==